ಓಣಂ: ಕೇರಳೀಯರ ಅತ್ಯಂತ ಪ್ರಮುಖ ಹಾಗೂ ಸಾಮೂಹಿಕ ಹಬ್ಬ. ಕೇರಳ ರಾಜ್ಯದಿಂದ ಹೊರಗಿರುವ ಮಲಯಾಳಿಗಳೂ ರಾಜ್ಯದ ಒಳಗೇ ಇರತಕ್ಕ ಮಲಯಾಳಿಗಳಲ್ಲದ ಇತರರೂ ಈ ಹಬ್ಬವನ್ನು ಕೇರಳದ ರಾಷ್ಟ್ರೀಯ ಹಬ್ಬವೆಂದು ಪರಿಗಣಿಸಿ, ಹಬ್ಬದ ಸಡಗರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪಾಲುದಾರರಾಗುತ್ತಾರೆ.

ಈ ಹಬ್ಬ ಮಲಯಾಳಿ ಶಕೆಯ ಕೊಲ್ಲ ವರ್ಷದ ಮೊದಲ ತಿಂಗಳಾದ ಚಿಂಙಮ್ (ಸಿಂಹ)ನಲ್ಲಿ ಬರುತ್ತದೆ. ರೋಮನ್ ಕ್ಯಾಲೆಂಡರ್ ಪ್ರಕಾರ ಇದು ಆಗಸ್ಟ್‌-ಸೆಪ್ಟೆಂಬರ್ನಲ್ಲೂ ಶಕವರ್ಷದ ಪ್ರಕಾರ ಶ್ರಾವಣಮಾಸದಲ್ಲೂ ಬೀಳುತ್ತದೆ.

ವಾಮನಾವತಾರದಂದು ಅವನ ಪದಘಾತದಿಂದಾಗಿ ಪಾತಾಳಗತನಾದ ಬಲಿಚಕ್ರವರ್ತಿ ವರ್ಷಕ್ಕೊಮ್ಮೆ ಈ ಹಬ್ಬದಂದು ಮತ್ತೆ ಭೂಲೋಕಕ್ಕೆ ಬರುವನೆಂದೂ ಪ್ರಜಾವತ್ಸಲನೂ ಧರ್ಮಿಷ್ಠನೂ ಆದ ಅವನ ಹೆಸರಿನಲ್ಲಿ ಜನ ಹಬ್ಬ ಆಚರಿಸಬೇಕೆಂದೂ ಐತಿಹ್ಯವಿದೆ.
ತಿರುಓಣಂ ದಿನವನ್ನು ಕೇರಳೀಯರು ಅತ್ಯಂತ ಆಸಕ್ತಿಯಿಂದಲೂ ಕುತೂಹಲದಿಂದಲೂ ನಿರೀಕ್ಷಿಸುವರು. ಹೀಗೆ ಸ್ವಾಭಾವಿಕವಾಗಿಯೇ ಓಣಂ ಕೇರಳದ ಅತ್ಯಂತ ಶ್ರೇಷ್ಠ ನಾಡಹಬ್ಬವಾಗಿ ಪರಿಣಮಿಸಿದೆ. ದಾನದಯಾಸಂಪನ್ನನಾಗಿದ್ದ ತಮ್ಮ ಚಕ್ರವರ್ತಿಯ ಆಳ್ವಿಕೆಯಲ್ಲಿ ತಾವು ಅನುಭವಿಸಿದ ಸುಖಸಂತೃಪ್ತಿಗಳನ್ನು ಕೊಂಡಾಡುವ ಸಲುವಾಗಿ ಓಣಂ ಅನ್ನು ಆಚರಿಸುತ್ತಾರೆ, ಕೇರಳದ ಜನ, ಅಲ್ಲದೆ, ಹೆಚ್ಚು ಸಮೃದ್ಧವೂ ಸುಖಶಾಂತಿದಾಯಕವೂ ಆದ ಭವಿಷ್ಯವನ್ನು ತರುವ ಹರಿಕಾರನೆಂಬ ದೃಷ್ಟಿಯಿಂದಲೂ ಓಣಂ ಅವರಿಗೆ ಅರ್ಥಪುರ್ಣವಾಗಿದೆ.

ಅತ್ತಂ (ಹಸ್ತಾ ನಕ್ಷತ್ರದ ದಿನ) ದಿನದಿಂದ, ಎಂದರೆ ತಿರುಓಣಂಗಿಂತ ಹತ್ತು ದಿನಗಳಿಗಿಂತ ಮೊದಲೇ ಓಣಂ ಹಬ್ಬಕ್ಕೆ ಏರ್ಪಾಟುಗಳನ್ನು ಮಾಡತೊಡಗುತ್ತಾರೆ. ಹಳ್ಳಿ, ದೊಡ್ಡಪಟ್ಟಣ ಎಂಬ ಭೇದವಿರದೆ ಎಲ್ಲೆಡೆಯೂ ಎಲ್ಲರೂ ಆ ದಿನಗಳಲ್ಲಿ ಬಗೆಬಗೆಯ ಹೂಗಳನ್ನಾಯ್ದು ವಿಧವಿಧವಾದ ಅಲಂಕಾರಗಳನ್ನು ಮಾಡುತ್ತಾರೆ. ಹೀಗೆ ಅಲಂಕಾರಗೊಳಿಸುವುದನ್ನು ಅತ್ತಪ್ಪೊವಿಡಲ್ ಎಂದೂ ಅಲಂಕೃತ ಭಾಗವನ್ನು ಅತ್ತಪ್ಪೊಕ್ಕಳಂ ಎಂದೂ ಹೇಳುವರು. ಈ ಪುಷ್ಪಾಲಂಕಾರಕ್ಕೆ ಸಾಮಾನ್ಯವಾಗಿ ಕೆಂಪುದಾಸವಾಳ, ತುಂಬೆ, ತುಳಸಿ, ಮುಟ್ಟಿದರೆಮುನಿ ಗಿಡದ ಹೂ, ನೀಲಿ ಹೂ, ತಂಗಡಿ ಜಾತಿಯ ಹೂ, ಸೇವಂತಿಗೆ ಇತ್ಯಾದಿಗಳನ್ನು ಬಳಸುವುದು ರೂಢಿ. ಹಳ್ಳಿಗಳಲ್ಲಿ ಮಕ್ಕಳು ಓಣಂ ಹಬ್ಬದ ಮಹತ್ತ್ವವನ್ನೂ ಮಹಾಬಲಿಯ ಕೀರ್ತಿಯನ್ನೂ ವಿವರಿಸುವ ಜನಪದಗೀತೆಗಳನ್ನು ಹಾಡುತ್ತ ಮನೆಯಿಂದ ಮನೆಗೆ ಸಾಗುವುದನ್ನು ಗಮನಿಸಬಹುದು. ಉತ್ತರ ಕೇರಳದಲ್ಲಿ ಕೆಲವೆಡೆ, ಹೂವಿನ ಅಲಂಕಾರದ ಮಧ್ಯಭಾಗದಲ್ಲಿ ಮಣ್ಣಿನಿಂದ ರಚಿತವಾದ ಓಣತ್ತಪ್ಪನ (ಮಹಾಬಲಿಚಕ್ರವರ್ತಿ) ಮೂರ್ತಿಯನ್ನಿಡುವ ಪರಿಪಾಠವೂ ಉಂಟು, ದಕ್ಷಿಣ ಕೇರಳದಲ್ಲಿ (ಹಳೆಯ ದಕ್ಷಿಣ ತಿರುವಾಂಕೂರು ಪ್ರದೇಶ), ಮಣ್ಣಿನ ಪಾವಟಿಗೆಗಳ ಮೇಲೆ ದಿನದಿನವೂ ಹೂವಿನ ಅಲಂಕಾರ ಮಾಡಿ ತುತ್ತ ತುದಿಯ ಪಾವಟಿಗೆಯ ಮೇಲೆ ಸಗಣಿಯಿಂದ ಮಾಡಿದ ಎರಡೂವರೆ ಅಂಗುಲ ಎತ್ತರದ ಗಣಪನನ್ನೂ ಇಡಲಾಗುವುದು.
ಪುಷ್ಪಾಲಂಕಾರ ಹತ್ತು ದಿನಗಳ ತನಕ ನಡೆಯುತ್ತದೆ. ತಿರುಓಣಂ ದಿನದ ಸಂಜೆಗೆ ಸಮಾರಂಭ ಕೊನೆಗೊಳ್ಳುತ್ತದೆ. ಪ್ರತಿದಿನವೂ ನಿರ್ಮಾಲ್ಯವನ್ನು ಹಸೆಯ ಮೇಲಿನಿಂದ ತೆಗೆದು ಮನೆಯ ಮಾಡದ ಮೇಲೆ ಎಸೆಯವರು, ಇಲ್ಲವೇ ನೀರಿನಲ್ಲಿ ತೇಲಿಬಿಡುವರು. ಕೇರಳದಲ್ಲಿರುವ ಬಹುತೇಕ ಹಿಂದೂ ಧರ್ಮೀಯರು ಸ್ವ ಇಚ್ಛೆಯಿಂದ ಈ ಹಬ್ಬವನ್ನು ಆಚರಿಸುವರು. ಈ ಸಂದರ್ಭದಲ್ಲಿ ಅನ್ನ, ಬತ್ತ, ಬಾಳೆಹಣ್ಣು, ಎಳನೀರು, ಪಾಯಸ, ಪುವಡ (ಅಕ್ಕಿ ಮತ್ತು ತಾಳೆಬೆಲ್ಲದಿಂದ ಮಾಡಿದ ಒಂದು ಬಗೆಯ ಕಡುಬು)- ಇವುಗಳನ್ನು ನೈವೇದ್ಯವಾಗಿ ಅರ್ಪಿಸುವ ರೂಢಿಯಿದೆ. ನಂದಾದೀವಿಗೆಯೊಂದು ಉರಿಯುತ್ತಲೇ ಇರುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಬಿಲ್ಲುಬಾಣಗಳ ಪ್ರತಿರೂಪವನ್ನು ಇಟ್ಟು ಅದರಿಂದ ಪುವಡ ಮತ್ತು ಗಣಪತಿಗಳನ್ನು ಹೊಡೆಯಲಾಗುತ್ತದೆ. ಬಳಿಕ, ನೆರೆದಿರುವ ಜನರಿಗೆ ಪ್ರಸಾದ ವಿನಿಯೋಗವಾಗುವುದು.

ಹಬ್ಬಕ್ಕೆ ಮೊದಲು ಮನೆಗಳಲ್ಲಿ ಸಾರಣೆಕಾರಣೆಗಳ ಏರ್ಪಾಟುಗಳು ನಡೆಯುತ್ತವೆ. ಮನೆಯಂಗಳ ಶುಚಿಯಾಗುತ್ತದೆ. ಸಗಣಿ ಸಾರಿಸಿ, ಮಹಾಬಲಿಯ ಆಗಮನಕ್ಕೆ ಚೊಕ್ಕಟವಾದ ಪರಿಸರ ನಿರ್ಮಿತವಾಗುತ್ತದೆ. ಗಂಡಸರು, ಹೆಂಗಸರು, ಮಕ್ಕಳು-ಎಲ್ಲರೂ ತಮ್ಮ ನೆಚ್ಚಿನ ಮಾವೇಲಿ ಮನ್ನನನ (ಮಹಾಬಲಿ ರಾಜ) ಸ್ವಾಗತಕ್ಕೋಸ್ಕರ ಸಡಗರದಿಂದ ಸನ್ನದ್ಧರಾಗುತ್ತಾರೆ. ತಿರುವೋಣಂ ದಿನ ಮಹಾಬಲಿ ಪ್ರತಿಯೊಬ್ಬರ ಮನೆಯನ್ನೂ ಸಂರ್ದಶಿಸುವನೆಂಬ ನಂಬಿಕೆಯಿಂದ ಎಲ್ಲರೂ ಉತ್ರಾಡಂ (ಉತ್ತರಾಷಾಢ) ದಿನದ (ತಿರುಓಣಂನ ಹಿಂದಿನ ದಿನ) ಹೊತ್ತಿಗೆ ಎಲ್ಲವನ್ನೂ ಅಣಿಗೊಳಿಸುತ್ತಾರೆ. ಅಂದು ಜನ ಎಷ್ಟು ಸಡಗರದಲ್ಲಿರುತ್ತಾರೆಂದರೆ ಅದರ ಬಗೆಗೆ ಮಲಯಾಳಂನಲ್ಲಿ ಒಂದು ನುಡಿಗಟ್ಟೇ ಬೆಳೆದು ಬಂದಿದೆ: ಉತ್ರಾಡಪ್ಪಾಚ್ಚಿಲ್ (ಉತ್ತರಷಾಢದ ಧಾವಂತ) ಎಂದರೆ ಆ ಹಬ್ಬದ ಸಡಗರ ಎಂದರ್ಥ.

ಉಳಿದೆಲ್ಲಕ್ಕಿಂತ ಹೆಚ್ಚಾಗಿ ತಿರುವೋಣಂ ದಿನದ ಮಧ್ಯಾಹ್ನದ ಊಟಕ್ಕೂ ವಿಶೇಷತೆ ಇದೆ. ಶ್ರೀಮಂತರಾಗಲಿ ಬಡವರಾಗಲಿ ತಮ್ಮಿಂದಾದಷ್ಟು ಅದ್ದೂರಿಯಾಗಿ ಅಂದು ಔತಣವನ್ನು ಮಾಡುತ್ತಾರೆ. ಮಲಯಾಳಂನಲ್ಲಿ ಈ ಬಗೆಗೆ ಒಂದು ಹೇಳಿಕೆಯೇ ಇದೆ: ಕಾಣಂ ವಿಟ್ಟಂ ಓಣಂ ಉಣ್ಣಣಂ (ಮನೆಯಲ್ಲಿರುವ ಯಾವುದೇ ಧಾನ್ಯವನ್ನು ಮಾರಿಯಾದರೂ ಓಣಂ ಹಬ್ಬದೂಟವನ್ನು ಮಾಡಬೇಕು). ಔತಣಕ್ಕೆ ಬೇರೆ ಬೇರೆ ಬಗೆಯ ಭಕ್ಷ್ಯ ಭೋಜ್ಯಗಳನ್ನೂ ಪಾಯಸವನ್ನೂ ಮಾಡುವರು. ಬಡಿಸುವವರ ವಿನಾ ಕುಟುಂಬದ ಎಲ್ಲ ಸದಸ್ಯರೂ ಒಟ್ಟಿಗೆ ಕುಳಿತು ಊಟಮಾಡುತ್ತಾರೆ. ಬಾಳೆಯೆಲೆಗಳಲ್ಲಿ, ಪುಳಿಶ್ಯೇರಿ, ಎರಿಶ್ಯೇರಿ, ಅವಿಯಲ್, ತೋರನ್, ಪಚ್ಚಡಿ, ಕಿಚ್ಚಡಿ ಮತ್ತು ಮಾವಿನಕಾಯಿ, ನಿಂಬೆಹಣ್ಣು, ಶುಂಠಿ, ನೆಲ್ಲಿಕಾಯಿ ಇವುಗಳಿಂದ ಮಾಡಿದ ಉಪ್ಪಿನಕಾಯಿಗಳನ್ನು ಬಡಿಸುವರು. ಅಗಲವಾದ ಹಪ್ಪಳಗಳು, ಉಪ್ಪೇರಿಗಳು (ಹಲಸು, ಬಾಳೆಗಳಿಂದಾದುವು), ನೇಂದ್ರಬಾಳೆಹಣ್ಣುಗಳು-ಇವೆಲ್ಲ ತಿರುಓಣಂ ಹಬ್ಬದೂಟದಲ್ಲಿ ಕಾಣಸಿಗುವ ಪದಾರ್ಥಗಳು. ಬಹುಮಾನ ವಿನಿಯೋಗ ಕೂಡ ಓಣಂ ಹಬ್ಬದ ಪ್ರಧಾನ ಅಂಗವಾಗಿದೆ. ಗುಡಿಸಲು ನಿವಾಸಿಗಳಾದ ಗೇಣಿದಾರರು (ಕುಡಿಯಾನ್) ಮತ್ತು ಸೇವಕರು ತಮ್ಮ ಧಣಿಗಳಿಗೆ (ಜನ್ಮಿ, ತಂಬುರಾನ್) ಬಹುಮಾನಗಳನ್ನು ತರುವರು. ಆಗ ಜಮಿÁನುದಾರ ಅವರಿಗೆ ಬತ್ತ, ತರಕಾರಿ, ಹೊಸ ಬಟ್ಟೆ-ಹೀಗೆ ಮರುಕಾಣಿಕೆಯನ್ನೂ ಸಲ್ಲಿಸುವನು. ಈ ಬಹುಮಾನ ವಿನಿಯೋಗ ಅವರವರ ಅಂತಸ್ತಿಗೆ ಅನುಗುಣವಾಗಿಯೇ ನಡೆಯುತ್ತದೆ. ಗೇಣಿದಾರರು ತಾವು ಬೆಳೆಸಿದ ಕುಂಬಳಕಾಯಿ, ಬಾಳೆಹಣ್ಣುಗಳನ್ನೂ ಕಮ್ಮಾರರೇ ಮೊದಲಾದವರು ತಾವು ನಿರ್ಮಿಸಿದ ಹತ್ಯಾರುಗಳನ್ನೂ ಯಜಮಾನನಿಗೆ ಕಾಣಿಕೆಯಾಗಿ ಅರ್ಪಿಸುವರು. ಈ ಬಹುಮಾನಗಳನ್ನು ಬಣಕ್ಕಾ¿್ಚ (ಓಣಂ ಕಾಣಿಕೆ) ಎಂದು ಕರೆಯುವರು. ಮಲಯಾಳಂ ಸಾಹಿತ್ಯದಲ್ಲಿ, ಹೇಗೆ ಗೇಣಿದಾರರು ತಮ್ಮ ಯಜಮಾನನಿಗೆ ಕಾಣಿಕೆಯೀಯುವ ಸಲುವಾಗಿ ಪ್ರೀತಿಯಿಂದ ಬಾಳೆಹಣ್ಣು, ಸೌತೆಕಾಯಿಗಳನ್ನು ಬೆಳೆಯುವರೆಂಬುದು ನಾನಾ ಕಡೆಗಳಲ್ಲಿ ವರ್ಣಿತವಾಗಿದೆ.

ಓಣಂ ಹಬ್ಬದ ಕಾಲದಲ್ಲಿ ಕುಟುಂಬದ ಸಕಲರೂ ಮನೆ ಸೇರುವುದು ಪದ್ಧತಿ. ಕಾರಣಾಂತರದಿಂದ ಮನೆಯಿಂದ ದೂರ ವಾಸಮಾಡಬೇಕಾಗಿ ಬಂದ ಮಕ್ಕಳು ಸಹಿತ ಆ ಹೊತ್ತಿಗೆ ಹೇಗೋ ಮನೆ ಸೇರಲು ಪ್ರಯತ್ನಿಸುವರು. ಅವರಿಗೆ ಬರಲಾಗದಿದ್ದರೆ ಅವರು ತಮ್ಮ ತಂದೆತಾಯಿಯರಿಗೆ, ಹಿರಿಯರಿಗೆ, ಸೋದರ ಸೋದರಿಯರಿಗೆ ಬಹುಮಾನಗಳನ್ನು ಕಳುಹಿಸಿಕೊಡುತ್ತಾರೆ. ತಂದೆತಾಯಿಯರು, ಮದುವೆಯಾದ ತಮ್ಮ ಮಗಂದಿರಿಗೆ ತರಕಾರಿ ಇತ್ಯಾದಿಗಳನ್ನು ಕಳುಹಿಸಿಕೊಡುವರು. ಸಾಮಾನ್ಯವಾಗಿ ತಂದೆತಾಯಿಯರಿಗೆ ಕಳುಹಿಸುವ ಬಹುಮಾನಗಳೆಂದರೆ ವೀಳೆಯದೆಲೆ, ತಂಬಾಕು, ಹೊಸ ಬಟ್ಟೆಗಳು, ಹೊಸದಾಗಿ ಮದುವೆಯಾದ ದಂಪತಿಗಳು ತಮ್ಮ ತಂದೆ ತಾಯಿಯರಿಗೆ ಬಹುಮಾನ ಕಳುಹಿಸುವ ರೂಢಿಯೂ ಇದೆ. ಇದಕ್ಕೆ ಪ್ರತಿಯಾಗಿ ಆಭರಣಗಳನ್ನೂ ಹಣವನ್ನೂ ಹೊಸ ಬಟ್ಟೆಗಳನ್ನೂ ಮದುಮಕ್ಕಳಿಗೆ ಓದಿಸುವರು. ಓಣಂ ಕಾಲದಲ್ಲಿ ಕೊಡಲಾಗುವ ಹೊಸ ಬಟ್ಟೆಗಳನ್ನು ಓಣಕ್ಕೋಡಿ ಇಲ್ಲವೇ ಓಣಪ್ಪೊಡವ ಎಂದು ಕರೆಯುವುದಿದೆ. ತಂದೆತಾಯಿಯರನ್ನೊ ಹಿರಿಯರನ್ನೊ ಓಣಂ ಸಂದರ್ಭದಲ್ಲಿ ಸಂದರ್ಶಿಸಿ ಬಹುಮಾನ ಕೊಡುವ ಪದ್ಧತಿಯನ್ನು ಓಣಂ ಕಾಣಲ್ ಎಂದು ಕೆಲವೆಡೆ ಕರೆಯುತ್ತಾರೆ.

ಮನೋರಂಜನೆಯ ವಿಭಾಗದಲ್ಲೂ ಓಣಂ ಹಬ್ಬಕ್ಕೆ ತನ್ನದೇ ಆದ ಸ್ಥಾನವಿದೆ. ಗಂಡಸರು, ಹೆಂಗಸರು, ಮಕ್ಕಳು-ಇವರೆಲ್ಲ ಭಾಗವಹಿಸುವುದಕ್ಕೆ ಅನುಕೂಲವಾದ ಅನೇಕ ಆಟೋಟಗಳ ಸ್ಪರ್ಧೆಗಳೂ ಸಾಂಸ್ಕೃತಿಕ ಚಟುವಟಿಕೆಗಳೂ ವಿಜೃಂಭಣೆಯಿಂದ ಜರುಗುತ್ತವೆ. ಉಯ್ಯಾಲೆಯಲ್ಲಿ ತೂಗುವುದು, ತಿರುವಾದಿರಕ್ಕಳಿ, ಕೋಲಾಟ, ತುಂಬಿತ್ತುಳ್ಳಲ್-ಇವೆಲ್ಲ ಹೆಂಗಸರ ಆಟಗಳು. ವರ್ತುಲಾಕಾರದಲ್ಲಿ ಮುತ್ತೈದೆಯ ಅವಿವಾಹಿತ ತರುಣಿಯರೂ ನಿಂತು ಚಪ್ಪಾಳೆ ತಟ್ಟುತ್ತ ತಾಳಕ್ಕೆ ತಕ್ಕಂತೆ ಹಾಡು ಹೇಳಿಕೊಳ್ಳುತ್ತ ನೃತ್ಯವಾಡುತ್ತಾರೆ. ಗಂಡಸರಿಗೆ ಕುಟ್ಟಿಯುಂ ಕೋಲುಂ, ತಲಪ್ಪಂಡು, ಕಿಳಿಕಳಿ ಮೊದಲಾದ ಆಟಗಳಿವೆ. ಹಾಗೆಯೇ ಕಯ್ಯಾಂಗಳಿ, ಓಣತ್ತಲ್ ಮೊದಲಾದ ಸ್ಪರ್ಧೆಗಳೂ ಬಿರುಸಿನಿಂದ ಜರುಗುತ್ತವೆ. ಕುಮ್ಮಿ, ಪ¾ಕಳಿ, ವಟ್ಟುಕಳಿ, ಅಮ್ಮಾನ, ತಲಯಾಟ್ಟಂ ಕಳಿ, ಪಶುವುಂ ಪುಲಿಯುಂ-ಇತ್ಯಾದಿ ಆಟಗಳನ್ನು ಹುಡುಗಿಯರೂ ಹೆಂಗಸರೂ ಆಡುತ್ತಾರೆ.

ಹೀಗೆ ಹಬ್ಬದೂಟವುಂಡು, ಸಂತೋಷದಿಂದ ನಲಿದಾಡಿ, ಕುಣಿದಾಡಿ ಜನ ತಮ್ಮ ಹಳೆಯ ಧರ್ಮಿಷ್ಠ ರಾಜನ ಆಗಮನದ ಸಂಭ್ರಮವನ್ನು ಸ್ನೇಹಾದರ್ರ್‌ಹೃದಯದಿಂದ ಆಚರಿಸುತ್ತಾರೆ. ಉತ್ತರಾಡದಿಂದ ಹಿಡಿದು ನಾಲ್ಕು ದಿನಗಳವರೆಗೆ ಹಬ್ಬದ ವೈಭವೋಪೇತ ವಾತಾವರಣವಿರುತ್ತದೆ. ಒನ್ನಾಂ ಓಣಂ (ಒಂದನೆಯ ಓಣಂ), ತಿರುವೋಣಂ, ಮುನ್ನಾಂ ಓಣಂ, ನಾಲಾಂ ಓಣಂ-ಎಂಬುದಾಗಿ ಈ ದಿನಗಳನ್ನು ಹೆಸರಿಸುವರು, ನಾಲ್ಕು ದಿನಗಳ ಹಬ್ಬದ ಸಂಭ್ರಮ ಮುಗಿದ ತರುವಾಯ ಐದನೆಯ ದಿನ ಎಂದಿನಂತೆ ಕೇರಳದ ಜನ ತಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ನಿರತರಾಗುತ್ತಾರೆ. ಅವರಲ್ಲಿ ರಜಾದಿನಗಳನ್ನು ಸುಖವಾಗಿ ಅನುಭವಿಸಿದ ಸಂತೃಪ್ತಿ ಹೊಂದಿರುತ್ತಾರೆ.

ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು, ಕೇರಳ ಅನೇಕ ರಾಜಾಡಳಿತ ಪ್ರದೇಶಗಳಾಗಿ ವಿಭಜನೆಗೊಂಡಿತ್ತಷ್ಟೆ, ಆಗ ಓಣಂ ಹಬ್ಬವನ್ನು ದೇವಸ್ಥಾನಗಳಲ್ಲೂ ರಾಜಾಸ್ಥಾನಗಳಲ್ಲೂ ಆಚರಿಸುವ ರೂಢಿಯಿತ್ತು. ಕಥಕಳಿ, ಓಟ್ಟಂ ತುಳ್ಳಲ್, ಕುಮ್ಮಿ, ಕೊರತ್ತಿ ಯಾಟ್ಟಂ, ನಾದಸ್ವರ ಕಲ್ಲೆಕ್ರಿ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳೊಡನೆ ಓಣಂ ಸಂಭ್ರಮದಿಂದ ಅಂದು ನೆರವೇರುತ್ತಿತ್ತು. ರಾಜರು ತಮ್ಮ ಸಾಮಂತರಿಗೂ ಸೇವಕರಿಗೂ ಒಣಪ್ಪೊಡವೆಗಳನ್ನು ಕೊಟ್ಟು ಸನ್ಮಾನಿಸುತ್ತಿದ್ದರು.

ಈಗಲೂ ಓಣಂ ಸಾರ್ವಜನಿಕವಾಗಿ ಆಚರಣೆಯಲ್ಲಿರುವ ಸ್ಥಳವೆಂದರೆ ಎರ್ನಾಕುಲಂ ನಗರದಿಂದ ಆರು ಮೈಲಿ ದೂರದಲ್ಲಿರುವ ತ್ರಿಕ್ಕಕ್ಕರ. ಇದು ಮಹಾಬಲಿಯ ಆವಾಸಸ್ಥಾನವೆಂಬ ನಂಬುಗೆಯುಂಟು. ತ್ರಿಕ್ಕಕ್ಕರ ಎಂಬ ಹೆಸರು ತ್ತಿಕ್ಕಾಲ್+ಕರ=ಮೂರು ಕಾಲಿನ ಸ್ಥಳ-ಎಂಬುದರಿಂದ ಬಂದಿದೆಯೆನ್ನುತ್ತಾರೆ. ವಾಮನ ತನ್ನ ಕಾಲಿನಿಂದ ಮೂರು ಹೆಜ್ಜೆ ಅಳೆದು ಬಲಿಯನ್ನು ಪಾತಾಳ ಲೋಕಕ್ಕೆ ಕಳುಹಿಸಿದ ಸ್ಥಳವಿದಂತೆ. ಇಲ್ಲಿನ ದೇವಸ್ಥಾನದಲ್ಲಿ ಅನೇಕ ದೇವರುಗಳ ಮೂರ್ತಿಗಳಿವೆ. ಪ್ರಧಾನ ದೇವರುಗಳೆಂದರೆ ಶಿವ ಮತ್ತು ವಾಮನ. ರಾಜರು ಆಳುತ್ತಿದ್ದ ಕಾಲದಲ್ಲಿ ಓಣಂ ಹಬ್ಬ 28 ದಿನಗಳಷ್ಟು ದೀರ್ಘಕಾಲ ನಡೆಯುತ್ತಿತ್ತು; ಮಲೆಯಾಳ ಶಕೆಯಂತೆ ಕರ್ಕಾಟಕ ತಿಂಗಳಿನ ತಿರುವೋಣಂ ದಿನದಿಂದ ಆರಂಭಿಸಿ ಚಿಂಙಮ್ ತಿಂಗಳಿನ ತಿರುವೋಣಂ ದಿನಕ್ಕೆ ಅದು ಮುಕ್ತಾಯಗೊಳ್ಳುತ್ತಿತ್ತು. ಹಬ್ಬದ ಆಚರಣೆಯ ಸಮಸ್ತ ಜವಾಬ್ದಾರಿಗಳನ್ನೂ ರಾಜರೇ ಹೊತ್ತ್ತುಕೊಳ್ಳುತ್ತಿದ್ದರು.

ಪ್ರಸ್ತುತ, ತ್ರಿಕ್ಕಕ್ಕರ ದೇವಸ್ಥಾನದಲ್ಲೂ ಓಣಂ ಹಬ್ಬವನ್ನು ಹತ್ತುದಿನ ಆಚರಿಸಲಾಗುತ್ತದೆ-ಚಿಂಙಮ್ ತಿಂಗಳ ಅತ್ತಂದಿಂದ ಹಿಡಿದು ತಿರುವೋಣಂ ತನಕ, ಅತ್ತಂ ದಿನ ದೇವಸ್ಥಾನದ ಬಾವುಟವನ್ನೇರಿಸುವುದರಿಂದ ಹಬ್ಬ ಪ್ರಾರಂಭವಾಗುತ್ತದೆ. ಹಸೆಯ ಮೇಲೆ ಪುಷ್ಪಾಲಂಕಾರಗಳನ್ನು ಮಾಡಲಾಗುತ್ತದೆ. ಪ್ರತಿದಿನ ಮೂರು ಪುಜೆಗಳನ್ನು ನೆರವೇರಿಸುತ್ತಾರೆ. ಸ್ಥಳೀಕರ ಸಹಕಾರದೊಂದಿಗೆ ದೇವಸ್ಥಾನದ ಅಧಿಕಾರಿಗಳು ಹಬ್ಬದ ಆಚರಣೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿರುತ್ತಾರೆ. ಸಂಜೆ ಪುಜೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತವೆ.
ಆಲೆಪ್ಪಿ ತಾಲೂಕಿನ ಆರನ್ಮುಳ ಎಂಬ ಗ್ರಾಮದಲ್ಲಿ ನಡೆಯತಕ್ಕ ದೋಣಿಯ ಪಂದ್ಯ ಮತ್ತೊಂದು ವಿಶಿಷ್ಟ ಸಾರ್ವಜನಿಕ ಆಕರ್ಷಣೆಯಾಗಿದೆ. ದೋಣಿಗಳನ್ನು ಚುಂಡನ್ ವಳ್ಳಂ (ಹಾವು ದೋಣಿ) ಎಂದು ಕರೆಯುತ್ತಾರೆ. ಪ್ರತಿಯೊಂದು ದೋಣಿಯೂ ಆರನ್ಮುಳ ಹಳ್ಳಿಯ ಒಂದೊಂದು ವಿಭಾಗ ಇಲ್ಲವೇ ಕರೆಯನ್ನು ಪ್ರತಿನಿಧಿಸುತ್ತದೆ. ಈ ದೋಣಿಯ ಸ್ಪರ್ಧೆಗೆ ಹಿನ್ನಲೆಯಾಗಿ ಒಂದು ದಂತ ಕಥೆಯಿದೆ : ಆರನ್ಮುಳ ಗ್ರಾಮದಲ್ಲಿ ಒಂದು ಶಿವದೇವಾಲಯ ಅಸ್ತಿತ್ವದಲ್ಲಿದೆ. ಒಂದಾನೊಂದು ಕಾಲದಲ್ಲಿ ಉತ್ತರಾಡಂ ದಿನದಂದು, ದೇವಸ್ಥಾನಕ್ಕೆ ಬೇಕಾದ ಪರಿಕರಗಳನ್ನೊಳಗೊಂಡ ಮಾನವರಹಿತ ದೋಣಿಯೊಂದು ದೇವಸ್ಥಾನದ ಬಳಿ ಬಂದು ನಿಂತಿತಂತೆ. ಈಗಲೂ ಈ ಸನ್ನಿವೇಶವನ್ನು ಪುನರಭಿನಯ ಮಾಡುವಂತೆ, ತಿರುವಲ್ಲ ಎಂಬ ಗ್ರಾಮದಿಂದ (ಈ ಗ್ರಾಮ ಆರನ್ಮುಳದ ಪುರ್ವಭಾಗದಲ್ಲಿದೆ) ನಂಬೂದಿರಿ ಬ್ರಾಹ್ಮಣನೊಬ್ಬ ದೇವಸ್ಥಾನಕ್ಕೆ ಬೇಕಾದ ಸಾಧನಸಾಮಗ್ರಿಗಳನ್ನು ಮನುಷ್ಯರಹಿತ ದೋಣಿಯೊಂದರಲ್ಲಿ ಕಳುಹಿಸುತ್ತಾನೆ. ದೋಣಿಯ ಜೊತೆಗೇ ಬಂದ ಕಾವಲುಗಾರ ದೇವಸ್ಥಾನದ ಸಮೀಪ ಇಳಿದುಬಿಟ್ಟು ದೋಣಿಯನ್ನು ದೇವಸ್ಥಾನದ ಕಡೆಗೆ ಹಾಗೆಯೇ ತೇಲಿಬಿಡುತ್ತಾನೆ. ಅನೇಕಾನೇಕ ಹಾವು ದೋಣಿಗಳು ಈ ದೋಣಿಯನ್ನು ವಂಜಿಪಾಟ್ ಹಾಡಿಕೊಂಡು ಸ್ವಾಗತಿಸಲು ಮುನ್ನುಗ್ಗುತ್ತವೆ. ಇದೇ ದೋಣಿ ಪಂದ್ಯ. ಇತ್ತೀಚಿನ ಕಾಲದಲ್ಲಿ ಈ ದೋಣಿ ಪಂದ್ಯ ಎಷ್ಟು ಪ್ರಾಧಾನ್ಯ ಪಡೆದಿದೆಯೆಂದರೆ, ದೋಣಿ ನಡೆಸಿ ಪ್ರಥಮ ಸ್ಥಾನಪಡೆದು ಜಯಶೀಲರಾದವರಿಗಾಗಿ ಪ್ರಧಾನಮಂತ್ರಿಯವರ ಒಂದು ಪಾರಿತೋಷಕವನ್ನು ಬಹುಮಾನವಾಗಿ ಇಡಲಾಗಿದೆ.

ಓಣಂ ಹಬ್ಬದ ಪ್ರಾಧಾನ್ಯವನ್ನು ಗುರುತಿಸಿ, ಕೇರಳ ಸರಕಾರದವರು ಅದನ್ನೊಂದು ರಾಷ್ಟ್ರೀಯ ಹಬ್ಬವನ್ನಾಗಿ ಪರಿಗಣಿಸಿದ್ದಾರೆ. 1961ರಲ್ಲಿ ಓಣಂ ಹಬ್ಬ ಸರಕಾರದ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು. ತ್ರಿಕ್ಕಕ್ಕರ ದೇವಸ್ಥಾನದಲ್ಲಿ ದೀಪಹಚ್ಚಿ, ಬಾವುಟವೇರಿಸುವುದ ರಿಂದ ಹಬ್ಬದ ಕಾರ್ಯಕ್ರಮಗಳು ಪ್ರಾರಂಭವಾದವು. ಸಾಮೂಹಿಕ ಔತಣಗಳು, ಮಕ್ಕಳ ಕೂಟಗಳು, ಆಟೋಟ ಸ್ವರ್ಧೆಗಳು ಕೇರಳದಾದ್ಯಂತ ಜರುಗಿದುವು.
ಓಣಂ ಹಬ್ಬ ಪ್ರತಿಯೊಬ್ಬ ಮಲಯಾಳಿಗೂ ತನ್ನ ತಾಯ್ನಾಡಿನೊಂದಿಗೆ ತನಗಿರುವ ಬಾಂಧವ್ಯವನ್ನು ಎತ್ತಿತೋರಿಸುತ್ತದೆ; ಆತನ ಮನಸ್ಸಿನಲ್ಲಿ ಆನಂದದ ಅಲೆಗಳನ್ನು ಎಬ್ಬಿಸುತ್ತದೆ. ಈ ಹಬ್ಬ ಎಷ್ಟು ಜನಪ್ರಿಯವಾಗಿದೆಯೆಂದರೆ ಅದನ್ನು ಕುರಿತು ಒಂದು ಪಡೆನುಡಿಯೇ ಮಲಯಾಳದಲ್ಲಿ ತಲೆದೋರಿದೆ. ಓಣಂ ಕೇರಾ ಮೂಲ-ಓಣಂ ಇರದ ಮೂಲೆ-ಎಂದರೆ ಯಾವ ದೈವತ್ವ ನಾಗರಿಕತೆಗಳೂ ಇಲ್ಲದ ಸ್ಥಳ ಎಂದು ಅರ್ಥ, ಓಣಂ ಇಲ್ಲದ ಮೂಲೆ ಇಲ್ಲ ಎಂಬುದು ತಾತ್ಪರ್ಯ.

ಮಹಾಬಲಿಯ ಮಹತ್ತ್ವವನ್ನು ಕುರಿತು ಜನಪದ ಗೀತೆಯೊಂದರಲ್ಲಿ (ಓಣಪಾಪಿಟ್) ಬರುವ ಈ ಕೆಳಗಿನ ಹಾಡನ್ನು ಸಾಮಾನ್ಯವಾಗಿ ಹೆಂಗಸರು ಉಯ್ಯಾಲೆ ಆಡುವಾಗಲೂ, ಮಕ್ಕಳು ಹೂ ಕೊಯ್ಯುವಾಗಲೂ(ಅತ್ತಪ್ಪು) ಹಾಡುವ ಬಳಕೆಯಿದೆ;

ಮಾವೇಲಿ ನಾಡ್ ವಾಣೀಡುಂ ಕಾಲಂ
ಮಾನುಷರೆಲ್ಲಾರು ಮೊನ್ನುಪೋಲೆ	 	
ಕಳ್ಳವುಂ ಇಲ್ಲ, ಚದಿಯುಂ ಇಲ್ಲ
ಎಳ್ಳೋಳಮಿಲ್ಲ ಒ¿ವಚನಂ.

ಕನ್ನಡದಲ್ಲಿ ಇದರ ಅನುವಾದ ಹೀಗಾಗುತ್ತದೆ :

ಮಾಬಾಲಿ ನಾಡಾನು ಆಳೂವ ಕಾಲಾದಿ
ಮನುಷ್ಯರೆಲ್ಲಾರೂ ಒಂದೆ ರೀತಿ;
ಕಳವೂ ಇಲ್ಲಾವು, ಮೋಸಾನೂ ಇಲ್ಲಾವು
ಸುಳ್ಳಂತೂ ಎಳ್ಳಷ್ಟೂ ಇರನಿಲ್ಲ.	(ಎಸ್.ಎಸ್.ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ